Monday, December 13, 2010

Love is sweet Poison

ಕೊನೆಗೂ ಕೂಡದ ಪ್ರೀತಿ...... 
ಮೊಬೈಲ್ ಇಲ್ಲದ ಕಾಲವದು. ಆವಾಗ ಎಲ್ಲಿ ಮೊಬೈಲ್? ತಂತ್ರಜ್ಞಾನ, ಜನಜೀವನ ಇಷ್ಟೊಂದು ಮುಂದುವರೆದಿರಲಿಲ್ಲ. ಆದರೆ ಪ್ರೀತಿಸುವ ಮನಸ್ಸುಗಳಿಗೆ ಅನುಕೂಲಕರವಾದ ಎಲ್ಲಾ ವಾತಾವರಣ ಆಗ ಇತ್ತು. ಬಹುಷ್ಯ ಈ ವಾತಾವರಣವೇ ಅವರ ಪ್ರೀತಿಯ ಹುಟ್ಟಿಗೆ ಕಾರಣವಾಯಿತೇನೋ?
ಅವರಿಬ್ಬರ ನಡುವಿನ ಸ್ನೇಹ ಯಾವಾಗ ಪ್ರೇಮವಾಗಿ ಮಾರ್ಪಟ್ಟಿತೋ ಗೊತ್ತಿಲ್ಲ. ಅದು ಪ್ರೀತಿ ಎಂದು ತಿಳಿಯುವ ಹೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಅದು ಅವರ ಪದವಿಯ ಕೊನೆಯ ವರ್ಷವಾಗಿದ್ದರಿಂದ ಅವರು ಬೇರೆ-ಬೇರೆ ಸ್ಥಳಗಳಿಗೆ ಪಲಾಯನಗೈಯಲೇ ಬೇಕಾಯಿತು. ಅವನು ಉದ್ಯೋಗ ಅರಸಿ ಬೆಂಗಳೂರಿಗೆ ಹೋದನು. ಇತ್ತ ಇವಳು ಮನೆಯ ಒತ್ತಾಯಕ್ಕೆ ಮಣಿದು ಉದ್ಯೋಗದ ಸೊಲ್ಲೆತ್ತದೆ ಆಟೋಗ್ರಾಫ್ ಡೈರಿ ನೋಡುತ್ತಾ ಸುಮ್ಮನಾಗುತ್ತಿದ್ದಳು. ಮನೆಯಲ್ಲೆಲ್ಲಾ ಬರೀ ಸ್ಮಶಾನ ಮೌನ, ಚಿಗುರೆಯಂತೆ ಚೂಟಿಯಾಗಿದ್ದ ಈಕೆ ಸಮ್ಮನಾಗಿದ್ದಳು. 'ಎಷ್ಟಾದರೂ ಕಾಯಿಯಾದ ಪ್ರೀತಿ ಅಲ್ಲವೇ? ಹೂವಾಗಿದ್ದರೆ ಚಿವುಟಬಹುದಾಗಿತ್ತೇನೋ.' ಆದರೆ ಅದು ಮಾಗಿಹೋಗಿತ್ತು. ಮನೆಯಲ್ಲಿ ಮದುವೆಯ ಒತ್ತಾಯ ಬೇರೆ ಹೆಚ್ಚುತ್ತಲೇ ಇತ್ತು. ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಸುರೇಶನಿಗೆ ತಿಳಿಸಲೇಬೇಕು. ಎಂದು ಪಟ್ಟು ಹಿಡಿದು, ಬಂಡು ಧೈರ್ಯದಿಂದ ಅವನಿಗೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹೇಳಿಯೇ ಬಿಟ್ಟಳು.
ಪತ್ರ ಕಳುಹಿದ ಮೇಲೆ ಮನಸ್ಸು ಸುಮ್ಮನಿರಬೇಕಲ್ಲ. ಯಾಕೆ ಪ್ರತ್ಯುತ್ತರ ಬರಲಿಲ್ಲ. ಪತ್ರ ತಲುಪಿತೋ ಹೇಗೋ. ಎಂದು ಹಲವು ಅನುಮಾನಗಳ ಸುಳಿಯಲ್ಲಿ ಆಕೆ ಸಿಲುಕಿದ್ದಳು. ಪ್ರತ್ಯುತ್ತರಕ್ಕಾಗಿ ನೀರಿನಿಂದ ಹೊರತೆಗೆದ ಮೀನಿನಂತೆ ವಿಲಿ-ವಿಲಿ ಒದ್ದಾಡುತ್ತಿದ್ದಳು. ಪತ್ರ ಇಂದು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಬಹುಷ್ಯ ಇಂದಿನಷ್ಟು ಸೌಲಭ್ಯಗಳಿದ್ದರೆ ಫೋನಾಯಿಸುತ್ತಿದ್ದಳೋ ಏನೋ..! ಕೊನೆಗೂ ಒಂದು ದಿನ ನಿರೀಕ್ಷೆಯ ಬಸುರನ್ನು ಒಡೆದು ಒಂದು ಪತ್ರ ಬಂದೆ ಬಿಟ್ಟಿತು.
ಪ್ರೀತಿಯ ಗೀತಾ,
ನಿನ್ನ ಪತ್ರವನ್ನು ಓದಿದೆ, ನಾನೂ ಸಹ ನಿನಗೆ ತುಂಬಾ ಪ್ರೀತ್ರಿಸುತ್ತಿದ್ದೇನೆ. ಆದರೆ, ಸ್ನೇಹಕ್ಕೆ ಚ್ಯುತಿ ಬರಬಹುದೆಂದು ನನ್ನ ಒಡಲಿನ ಪ್ರೀತಿಯನ್ನು ನಿನ್ನ ಜೊತೆ ಹಂಚಿಕೊಳ್ಳಲಿಲ್ಲ. ಈಗಲೂ ಅಷ್ಟೇ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಇಂದು ಕ್ಷಣ ಜೀವಿಸಲಾಗದು. ನಾನು ನಿನ್ನಲ್ಲಿಗೆ ಬಂದು ನಿಮ್ಮ ತಂದೆಯ ಜೊತೆ ಮಾತಾಡುತ್ತೇನೆ. ಆದರೆ ಈಗ ನನ್ನ ತಂದೆಗೆ ಹುಷಾರಿಲ್ಲ ಆದ್ದರಿಂದ  ಚೇತರಿಸಿಕೊಂಡ ತಕ್ಷಣ ನಿನ್ನಲ್ಲಿಗೆ ಬರುತ್ತೇನೆ.
ಇತಿ ನಿನ್ನ ಪ್ರೀತಿಯ
ಸುರೇಶ.

ಪತ್ರ ಓದಿದ್ದೆ ಆಕೆಯ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ವಾರವಾಗುತಿತ್ತದ್ದಂತೆ ಈ ಕಡೆಯ ಪತ್ರ ಆಕಡೆಗೆ, ಆ ಕಡೆಯಿಂದ ಈ ಕಡೆಗೆ ಹೀಗೆ ಪ್ರೀತಿಯ ಪ್ರಹಸನ ನಡೆಯುತ್ತಿತ್ತು. ಆದರೆ ಈ ವಿಚಾರ ಮನೆಯಲ್ಲಿ ಮಾತ್ರ ಯಾರಿಗೂ ತಿಳಿದಿರಲಿಲ್ಲ. ತಿಳಿಯಲು ತಾನೆ ಹೇಗೆ ಸಾಧ್ಯ. ಪತ್ರಗಳೇನಿದ್ದರೂ ಸ್ನೇಹಿತೆಯ ಮನೆಗೆ ಹೋಗುತ್ತಿದ್ದವು. ಹೀಗೆ ಪ್ರೇಮ ಪತ್ರಾಯಣ ಮಂದುವರಿಯಿತು.
ದಿನಗಳೆದಂತೆ ಸುರೇಶ ಕಡೆಯಿಂದ ಪತ್ರಗಳು ಕಮ್ಮಿಯಾದವು. ಬಹುಷ್ಯ ಕಚೇರಿಯ ಕೆಲಸ ಹಾಗೂ ತಂದೆಯ ಆರೋಗ್ಯದಿಂದಾಗಿ ಸಮಯ ಜೋಡಿಸಲಾಗುತ್ತಿಲ್ಲವೆನೋ ಎಂದು ಸಮ್ಮನಾದಳು. ಈ ಕಡೆಯಿಂದ ವಾರವಾರಕ್ಕೆ ತಪ್ಪದೆ ಪತ್ರ ಹೋಗುತಿತ್ತು. ಅಂತೂ ಒಂದು ದಿನ ಸುರೇಶ ಕಡೆಯಿಂದ ಪತ್ರ ಬರುವುದು ಸಂಪೂರ್ಣವಾಗಿ ನಿಂತೆಬಿಟ್ಟಿತು.
ಸುರೇಶ ತಂದೆಯ ಆರೋಗ್ಯ ಏನಾಯಿತೋ? ಕಚೇರಿ ಕೆಲಸಗಳು ಹೆಚ್ಚಾದವೋ? ಏನಾಯಿತೋ ಏನೋ ಒಂದು ತಿಳಿಯದೆ ಗೀತಾ ದಿನಗಳನ್ನು ದೂಡುತ್ತಿದ್ದಳು. ಆದರೆ ಒಳಗಿದ್ದ ಪ್ರೀತಿ ಆಕೆಯನ್ನು ದಿನೇ-ದಿನೇ ಸುಡುತ್ತಲೇ ಇತ್ತು. ಕೊನೆಗೆ ತಾನೇ ಹೇಗಾದರೂ ಮಾಡಿ ಸುರೇಶನಲ್ಲಿಗೆ  ಹೋಗಬೇಕೆಂದು ನಿರ್ಧರಿಸಿದಳು. ಆದರೆ..... ಬೆಂಗಳೂರು ಎಂಥಾ ನಗರವೋ ಏನೋ, ಎಲ್ಲಿ ಹೋಗೋದು? ಹೇಗೆ ಹೋಗೋದು? ಅಲ್ಲಿ ಸುರೇಶ ಮನೆ ಎಲ್ಲಿರುವುದೋ ಏನೋ? ಇಲ್ಲಿಯವರೆಗೆ ಬರೀ ಪುಸ್ತಕದಲ್ಲಿ ಹಾಗೂ ಬೇರೆಯವರ ಬಾಯಿಂದ ಮಾತ್ರ ಬೆಂಗಳೂರಿನ ಬಗ್ಗೆ ಕೇಳಿದ ಈಕೆಗೆ ತಮ್ಮ ಹಳ್ಳಿಯೊಂದು ಬಿಟ್ಟರೆ ಬೇರೆನೂ ತಿಳಿಯದಷ್ಟು ಮುಗ್ಧೆ ಈಕೆ. ಹಾಗೆಂದು ಸುಮ್ಮನಿದ್ದರೆ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ, ಎಂದು ಕೊನೆಗೂ ಆಕುಂಚನಗೊಳ್ಳದೆ(ಕುಗ್ಗದೆ) ಬೆಂಗಳೂರಿಗೆ ಪ್ರಯಾಣ ಬೆಳೆಸಿಯೇ ಬಿಟ್ಟಳು. ಅಲ್ಲಿ ಇಳಿದಿದ್ದೆ ಅಲ್ಲಿನ ಜನ, ದೊಡ್ಡ ರಸ್ತೆ, ಕಟ್ಟಡಗಳು, ಟ್ರಾಫಿಕ್ ಎಲ್ಲವೂ ಆಕೆಯನ್ನು ಹೌಹಾರುವಂತೆ ಮಾಡಿತು. ತಂದಿದ್ದ ಅಲ್ಪಸ್ವಲ್ಪ ದುಡ್ಡಿನಿಂದ ಸುರೇಶ ಮನೆಯ ಕಡೆಗೆ ಹೊರಟಳು. ಮನೆ ಸಿಕ್ಕಿದ್ದೆ ತಡ ಖುಷಿ-ಖುಷಿಯಿಂದ ಮನೆಯ ಕಡೆಗೆ ಧಾವಿಸಿದಳು. ಆದರೆ ವಿಪಯರ್ಾಸ, ಜಾಳುಗಟ್ಟಿದ ಮನೆಯ ಬಾಗಿಲು, ಜಡಿದ ಬೀಗ ಅನೇಕ ಆಖ್ಯಾನಗಳ ವರಸೆಯನ್ನೇ ಹೇಳುತ್ತಿತ್ತು. ಛೇ.. ಹಾಗೇ ಯೋಚಿಸುವುದು ತಪ್ಪು ಎಂದು ಅಲ್ಲಿಂದ ಕಾಲು ಕಿತ್ತಿದಳು. ವಿದ್ಯಾಭ್ಯಾಸದಲ್ಲಿ ಪದವಿ ಮುಗಿದ ಈಕೆಗೆ ಅವನ ಕಚೇರಿಯ ವಿಳಾಸ ಹುಡುಕಿ ತೆಗೆಯುವುದು ಅಷ್ಟೇನು ಕಷ್ಟದ ಕೆಲಸವಾಗಿರಲಿಲ್ಲ. ಕೊನೆಗೂ ಕಚೇರಿ ಪತ್ತೆ ಹಚ್ಚಿ ಜೀವ ಕೈಯಲ್ಲಿ ಹಿಡಿದುಕೊಂಡು ಕಚೇರಿ ತಲುಪಿದಳು.
ಅಲ್ಲಿ ಸುರೇಶ ವಿಷಯದ ಸತ್ಯ ಕೇಳಿ ಆಕೆಯ ಹೃದಯ ಒಡೆದು ಹೋಯಿತು. ಕಣ್ಣೀರು ಸಮುದ್ರದಂತೆ ಉಕ್ಕಿ ಬಂದವು. 'ಕೊನೆಗೂ ನನ್ನ ಪ್ರೀತಿ ನನ್ನ ಕೈಸಿಗಲಿಲ್ಲ,' ಎಂದು ರೋಧಿಸುತ್ತಾ ಅವನ ಫೋಟೊ ಮೇಲಿದ್ದ ಹಾರವನ್ನು ಕಿತ್ತೆಸೆದಳು. ಅಷ್ಟೊಂದು ಗಾಢವಾಗಿದ್ದ ಪ್ರೀತಿ ಬದುಕಲು ಬಿಟ್ಟಿತೆ? ಅವಳ ಪ್ರಾಣಪಕ್ಷಿಯೂ ಆಗಂತುಕನಾಗಿ ಬಂದವನ ಹಿಂದೆ ಹಾರಿಹೋಯಿತು.
'ಕೊನೆಗೂ ಪತ್ರದಲ್ಲಿ ಒಂದಾದ ಪ್ರೀತಿ, ವಾಸ್ತವದಲ್ಲಿ ಒಂದಾಗಲೇ ಇಲ್ಲ.'
ಆತೀಶ. ಬಿ. ಕನ್ನಾಳೆ.

2 comments: