Sunday, December 12, 2010

ಅಮ್ಮನೆಂಬ ಬ್ರಹ್ಮ.....
(ತಾಯಿಯಾಗಿ ಮಲತಾಯಿಯಲ್ಲ)

 ಮೊನ್ನೆ ಟೆರಸ್ ಮೇಲೆ ನಿಂತು ರಾಜಧಾನಿಯ ರಹದಾರಿಗಳ ಕಡೆ ಕಣ್ಣು ಹಾಯಿಸಿದೆ. ಮೋಟಾರು-ಸೈಕಲ್ಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಬರೀ ಅವುಗಳದ್ದೆ ಸದ್ದು. ವಾಹನಗಳ ಪರದಾಟ ನೋಡಿ-ನೋಡಿ ಸುಸ್ತಾಯ್ತು. ಅಲ್ಲಿಂದ ಟೆರಸ್ನ ಮತ್ತೊಂದು ಭಾಗಕ್ಕೆ ಬಂದು ಓಣೆಯ ರಸ್ತೆಯ ಕಡೆಗೆ ದೃಷ್ಟಿ ನೆಟ್ಟೆ. ಅದು ಸಾಯಂಕಾಲದ ಸಮಯ ರಸ್ತೆಯಲ್ಲೆಲ್ಲಾ ನೀರವ ಮೌನ. ಅಲ್ಲಿ ಒಂದು ಪುಟ್ಟ ಮನೆ, ಆ ಮನೆ ಹೊರಗೆ ಇಬ್ಬರು ಪುಟ್ಟ ಮಕ್ಕಳು ಬಹುಶಃ ಅಣ್ಣತಮ್ಮಂದಿರಿರಬಹುದೆನೋ ಅನಿಸಿತ್ತೆ. ಇಬ್ಬರ ಕೈಯಲ್ಲು ಒಂದೊಂದು ಬಿದಿರು ಅವರು ಮುಂದೆ ಯಾವುದೋ ಒಂದು ಯುದ್ಧ ನಡೆಯಲಿದೆ ಎಂಬಂತೆ ಖಡ್ಗಯುದ್ಧ ಪಾರಾಯಣದಲ್ಲಿ ತೊಡಗಿದ್ದರು.
ಆ ಮನಮೋಹಕ ದೃಶ್ಯ ಕಾಣುತ್ತಲೆ ಏನೋ ಒಂಥರಾ ಖುಷಿಯಾಗಿ, ಮನಸ್ಸಿಗೆ ರೆಕ್ಕೆ ಬಂದು ಹಾರಾಲಾರಂಭಿಸಿತು. ಮುಂದುವರಿದು ಆ ಬಾಲಕರ ಬಾಲ್ಯ ಚೇಷ್ಟೆಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ. ಅದು ಹಾಗೇ ಯಾವುದೋ ಒಂದು ಕಲ್ಪನ್ಪಾಲೋಕಕ್ಕೆ ಕರೆದೊಯ್ದಿತ್ತು. ನನ್ನ ಬಾಲ್ಯದ ಕುಚೇಷ್ಟೆಗಳು ನೆನಪಾಗಿ ಕಣ್ಣ ಅಂಚಲ್ಲಿ ಹನಿ ಮೂಡಿತು. ಮಳೆಹನಿಯಲ್ಲಿ ಮೆಂದು ಕಾಗದದ ದೋಣಿ ಮಾಡಿ ಆಡಿದ್ದು, ಮಳೆ ಬಾರದಿದ್ದಾಗ ಮಳೆ ಬಾರೋ ಮಲ್ಲೇಶ.. ಎಂದು ಹಾಡಿ ಕುಣಿದಾಡಿದ್ದು ಹೀಗೆ ಮಣ್ಮಂದೆ ಕನಸಿನ ಲೋಕವೆ ಅವತರಿಸಿ ನಿಂತಿತ್ತು. ಹಾಗೇ ಆ ಕ್ಷಣಗಳನ್ನು ಆಸ್ವಾದಿಸುತ್ತಿದ್ದೆ, ಅಷ್ಟರಲ್ಲೆ ಎಲ್ಲಿಂದ ಬಂದಳೋ ಆ ಮಹಾತಾಯಿ...! ಸುನಾಮಿಯಂತೆ ಬಂದವಳೆ ನಾಲ್ಕೈದು ವರ್ಷದ ಆ ಪೋರನನ್ನು ತನ್ನತ್ತ ಎಳೆದು ಕೈಯಲ್ಲಿದ್ದ ಬೆತ್ತ ಕಸಿದುಕೊಂಡು ಅದರಿಂದಲೇ ನಾಲ್ಕು ಬಾರಿಸಿ ಹುಡುಗನನ್ನು ಭವ್ಯ ಬಂಗಲೆಯೊಂದಕ್ಕೆ ಎಳೆದೊಯ್ದಳು. ಇನ್ನೊಬ್ಬ ಹುಡುಗ ಮಾತ್ರ ತುಟಿ ಪಿಟಕ್ ಅನ್ನದೆ ಮ್ಲಾನವದನದಿಂದ ಚರಂಡಿಯ ಪಕ್ಕ ನಿಂತು ಕಂಬನಿಗೆರೆಯುತ್ತಿದ್ದನು. ನನಗೆ ಒಂದೂ ತಿಳಿಯಲಿಲ್ಲ. ಆ ಘಟನೆಯ ಜೊತೆಗೆ ಅನೇಕ ಪ್ರಶ್ನೆಗಳು ಕವಲೊಡೆಯುತ್ತಿದ್ದವು. ಆ ಯಮ್ಮ ಆ ಹುಡುಗನನ್ನೆ ಏಕೆ ಎಳೆದೊಯ್ದರು? ಈ ಹುಡುಗ ಮಾತ್ರ ಯಾಕೆ ಇಲ್ಲೆ ನಿಂತಿದ್ದಾನೆ? ಹಾಗೇನಾದ್ರು ತಪ್ಪು ಮಾಡಿದಿದ್ರೆ ಇಬ್ಬರನ್ನು ಹೊಡೆಯಬೇಕಿತ್ತು. ಯಾಕೆ ಆ ಒಬ್ಬ ಪೋರನನ್ನೆ ಹೊಡೆದು ಎಳೆದೊಯ್ದರು? ಬಹುಶಃ ಆಕೆ ಈ ಹುಡುಗನ ಮಲತಾಯಿ ಏನಾದ್ರು ಆಗಿರಬಹುದೆ? .... ಹೀಗೆ ನೂರಾರು ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಗೆಡುಹುತ್ತಿದ್ದರಿಂದ ಪ್ರಶ್ನೆಗಳ ವರಸೆಯೇ ನನ್ನೆದುರಿಗಿತ್ತು.

ಇದರ ಜೊತೆಗೆ ಆನೆಗಾತ್ರದ ಮಹಿಳೆ ಮೇಲೆ ನನಗೆ ಎಲ್ಲಿಲ್ಲದ ಕೋಪ. ಏಕೆಂದರೆ, ಆ ಹುಡುಗರ ಬಾಲ್ಯ ಕುಚೇಷ್ಟೆಗಳನ್ನು ಗಮನಿಸುತ್ತಾ ಕ್ಷಣಕಾಲ ಇಡೀ ಪ್ರಪಂಚವನ್ನು ಮರೆತು ನನ್ನ ಬಾಲ್ಯದಲ್ಲಿ ಕಳೆದುಹೋಗಿದ್ದೆ. ಆ ಕನಸಿನ ಮಹಲನ್ನು ಕ್ಷಣದಲ್ಲಿ ನುಚ್ಚುನೂರು ಮಾಡಿದಳಲ್ಲ ಈ ರಾ.....ಕ್ಷಸಿ ಎಂಬ ಕಾರಣಕ್ಕಾಗಿಯೋ ಏನೊ ಕೊಪ ಕಾಡುತಿತ್ತು.
ಅದೇನೆ ಇರಲಿ, ಮಹಿಳೆ ಆ ರೀತಿ ವತರ್ಿಸುವುದಕ್ಕೆ ಕಾರಣ ಆದ್ರು ಏನು....?? ಯೋಚಿಸಿದೆ ಏನೂ ತೋಚಲಿಲ್ಲ. ಸರಿ ಇದರ ಉತ್ತರ ಈ ಹುಡುಗನಿಂದ ಮಾತ್ರ ಸಾಧ್ಯ ಎಂದು ಅವನ ಕಡೆ ಹೊರಟೆ. ಕ್ಷಣಕಾಲ ಅವನ ಮುಖದ ಹತಾಶೆಯನ್ನು ಜಾಲಾಡಿ, ಕಣ್ಣಿನ ಆಳದಲ್ಲಿ ಅಡಗಿದ್ದ ಮುಗ್ಧತೆಯನ್ನು ಗಮನಿಸಿ, ಮರಿ ನಿನ್ ಹೆಸರೇನು ಎಂದು ಕೇಳಿದೆ. ಅದಕ್ಕೆ ಆಕಾಶ್ ಎಂದು ಗಲ್ಲ ಉಬ್ಬಿಸಿಕೊಂಡು ಉತ್ತರಿಸಿದ. ನನಗೆ ಅವನ ವದನ ನೋಡಿ ಕಪಿ ನೆನಪಾಗಿ ಕೊಂಚ ನಗುಬಂತು ಆದರೂ ನಗಲಿಲ್ಲ. ಪುಟ್ಟ ಯಾಕೋ ನಿಮ್ಮಮ್ಮ ನಿನ್ನ ತಮ್ಮನನ್ನು ಮಾತ್ರ ಕರೆದುಕೊಂಡು ಹೋದ್ರು ಎಂದು ಕೇಳಿದ್ದೆ ತಡ ಅದಕ್ಕೆ ಅವನು ನನ್ನ ತಮ್ಮ ಅಲ್ಲ; ನನ್ನ ಸ್ನೇಹಿತ ಅಷ್ಟೆ. ಅವನು ಇರೋದು ಆ ಬಂಗಲೆಯಲ್ಲಿ; ನಾವಿರೋದು ಈ ಗುಡಿಸಲಲ್ಲಿ. ಎಂದು ಬೆರಳು ತೋರಿದ. ಅಂಕಲ್ ನಾವು ಬಡವರಂತೆ ಅದಕ್ಕೆ ಆನಂದನನ್ನು ನನ್ನ ಜೊತೆ ಆಡೋದಕ್ಕೆ ಬಿಡೋದಿಲ್ಲ. ಎಂದು ಜೋರಾಗಿ ಆಳಲಾರಂಭಿಸಿದ. ಆ ಪುಟ್ಟನ ಮುಗ್ಧ ಮಾತುಗಳನ್ನು ಕೇಳಿ ನನ್ನ ಕಣ್ಣನಾಲಿಯಲ್ಲಿ ಕಂಬನಿ ಮೂಡಿದವು. ಆ ಘಟನೆಯ ಕಾರಣ ಹಾಗೂ ಸ್ವಾರಸ್ಯ ನನಗೆ ದರ್ಪಣದಷ್ಟು ನಿಚ್ಚಳವಾಯ್ತು.
ನಂತರ ಚಹ ಹೀರಲು ಸಹ ಮನಸ್ಸಾಗಲಿಲ್ಲ. ಯಾಕೋ ಮನಸ್ಸು ಯಾವ ಕೆಲಸಕ್ಕೂ ಒಪ್ಪದೆ, ಹೃದಯ ಭಾರವಾಗಿತ್ತು. ಪದೇ-ಪದೇ ಆ ಪುಟಾಣಿ ಹೇಳಿದ ಅಂಕಲ್ ನಾವು ಬಡವರಂತೆ ಎಂಬ ಮಾತು ನನ್ನ ಕಿವಿಯಲ್ಲಿ ಪುನರಾವರ್ತನೆ ಆಗುತಿತ್ತು.
ಯಾಕೆ ನಮ್ಮ ಸಮಾಜದ ಈ ಜನ ಶಿಕ್ಷಣ ಹಾಗೂ ಜೀವನಮಟ್ಟದಲ್ಲಿ ಮೇಲೆ ಹೋದಂತೆಲ್ಲಾ ಈ ರೀತಿ ಯೋಚಿಸುತ್ತಾರೆ. ಇದರಲ್ಲಿ ಆ ಮಕ್ಕಳ ತಪ್ಪಾದರೂ ಏನು? ಯಾರೂ ತಮ್ಮ ಇಚ್ಛೆಯಿಂದ ಬಡವರಾಗುವುದಿಲ್ಲ ಎಂಬ ಸತ್ಯ ತಿಳಿದಿದ್ದರೂ ಏಕೆ ಜಾಣಕುರುಡರಂತೆ ನಡೆದುಕೊಳ್ಳುತ್ತಾರೆ. (ನಿಜ, ಇಂದು ಆದರ್ಶ ಹಾಗೂ ನೈಜತೆಯ ನಡುವೆ ಕಲ್ಪನೆಗೂ ಎಟುಕದ ಕಂದಕ ಏರ್ಪಟ್ಟಿದೆ.) ಆದರೆ ಇಲ್ಲಿ ಪರಿಗಣಿಸಲೇಬೇಕಾದ ಅತೀ ಪ್ರಮುಖವಾದ ಅಂಶವೆಂದರೆ, ಈ ರೀತಿಯ ಘಟನೆಗಳು ಬೆಳೆಯುವ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಲ್ಲವು ಎಂಬ ಪರಿಕಲ್ಪನೆ ಪೋಷಕರಿಗಿಲ್ಲವೆ?!


ಇಂದು ಮಕ್ಕಳ ಜೀವನದಲ್ಲಿ ಮಾರ್ಗದರ್ಶಕಿ ಹಾಗೂ ಶಿಕ್ಷಕಿಯ ಸ್ಥಾನದಲ್ಲಿರಬೇಕಾದ ತಾಯಂದಿರು ಇಂಥ ಕೀಳುದಜರ್ೆಯ ಆಲೋಚನೆಗೆ ಇಳಿದರೆ ನಮ್ಮ ಸಮಾಜದ ಮುಂದಿನ ಸ್ಥಿತಿ ಏನಾಗಬೇಕು....?
ಆಗ ತಾನೆ ಜನಿಸಿದ ಮಗು ಮಾಂಸದ ಮುದ್ದೆಯಂತಿದ್ದು, ಸಮಾಜ ಹಾಗೂ ಅದರ ಸುತ್ತಲಿನ ವಾತಾವರಣ ಅದರ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಆ ಮಗು ಅಂಥದ್ದೇ ಸಂಸ್ಕಾರಗಳನ್ನು ಮ್ಕೈಗೂಡಿಸಿಕೊಳ್ಳುತ್ತದೆ. ಎಂಬ ಸಮಾಜಶಾಸ್ತ್ರಜ್ಞರ ಮಾತು ಇಲ್ಲಿ ನೆನೆಯಲೇಬೇಕು. ಏಕೆಂದರೆ, ಒಂದು ಮಗು ಬೆಳೆದು ಸಮಾಜಘಾತುಕ ಅಥವಾ ಸಮಾಜ ಸುಧಾರಕನೂ ಆಗಬಲ್ಲ. ಅದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದರ ಬಾಲ್ಯದಲ್ಲಿ ನೀಡುವ ಸಂಸ್ಕಾರವನ್ನೇ ಅವಲಂಭಿಸಿದೆ. ಮಾತೃಗರ್ಭದಲ್ಲಿರುವ ಭ್ರೂಣದ ಮೇಲೆ ಸುತ್ತಲಿನ ವಾತಾವರಣ ಪರಿಣಾಮ ಬೀರುತ್ತದೆ ಎಂದು ಒಂದು ಸಂಶೋಧನೆ ಸಿದ್ಧಾಂತ ಪಡಿಸಿದೆ. ಹೀಗಿರುವಾಗ ಮಾಂಸದ ರೂಪವನ್ನು ದಾಟಿ ಆಲೋಚನೆ ಮಾಡುವಷ್ಟು ಬೆಳೆದಿರುವ ಮಕ್ಕಳ ಮೇಲೆ ಇಂತಹ ಘಟನೆಗಳು ಬೀರದಿರಲು ಸಾಧ್ಯವೇ?
ಮಗು ಇನ್ನೂ ಮೂರು ಹೆಜ್ಜೆ ಸ್ವತಂತ್ರವಾಗಿ ಇಡಲಾಗದು ಆಗಲೇ ಅದಕ್ಕೆ ವರ್ಗಭೇದದ ಕುರಿತು ಬೋಧಿಸುವುದಾದರೆ ಭವಿಷ್ಯದಲ್ಲಿ ಆ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು ಎಂಬ ಖಾತ್ರಿಯಾದರೂ ಏನು..?
ಕೊಂಚ ಯೋಚಿಸಿ: ಅಂದು ಛತ್ರಪತಿ ಶಿವಾಜಿ ಅವರ ತಾಯಿ ಮಗನಿಗೆ ರಾಚಾಯಣ, ಮಹಾಭಾರತ ಆದರ್ಶಗಳನ್ನು ಬೋಧಿಸಿ, ಅವರ ರಕ್ತದ ಕಣ-ಕಣದಲ್ಲಿ ದೇಶಪ್ರೇಮ ತುಂಬದೇ ಹೋಗಿದ್ದಲ್ಲಿ ಅವರು ರಾಷ್ಟ್ರರಕ್ಷಣೆಯನ್ನಿ ನಿಲ್ಲಲಾಗುತಿತ್ತೆ? ವಿವೇಕಾನಂದರು ಭಾರತನ್ನು ಅಷ್ಟಾಗಿ ಪ್ರೀತಿಸಲು ಕಾರಣ ಅವರ ತಾಯಿ ಬಾಲ್ಯದಲ್ಲಿ ನೀಡಿದ ಶಿಕ್ಷಣ. ಅಷ್ಟೇ ಯಾಕೆ ಇಂದು ಅನೇಕ ಯೋಧರು ಯಾವುದೇ ವರ್ಣ, ವರ್ಗಭೇದವನ್ನು ಕಾಣದೆ ನಮ್ಮ ತಮ್ಮ ಜೀವ ಒತ್ತೆಯಿಟ್ಟು ಗಡಿ ಕಾಯುತ್ತಿರುವುದಕ್ಕೆ ಅವರ ತಾಯಂದಿರೂ ಕಾರಣವಾಗಿರಬಹುದು. ಒಂದು ವೇಳೆ ಅವರಿಗೂ ಮೇಲು-ಕೀಳು, ವರ್ಣ-ವರ್ಗಭೇದಗಳ ಪ್ರಬೋಧನೆ ನೀಡುತ್ತಿದ್ದಲ್ಲಿ ನಮ್ಮ ರಾಷ್ಟ್ರದ ಗತಿ ಏನಾಗುತಿತ್ತು.....?
ಅದಕ್ಕಾಗಿ ತ್ಯಾಗ, ಪ್ರೀತಿ, ಮಮತೆಗೆ ಪ್ರತೀಕವಾಗಿರುವ ತಾಯಂದಿರೆ ನಿಮ್ಮ ಮಕ್ಕಳ ಕೋಮಲವಾದ ಮನಸ್ಸನ್ನು ಹಾಳುಮಾಡಬೇಡಿ. ನೀವೇ ಅವರ ಪಾಲಿಗೆ ಬ್ರಹ್ಮ ನೀವು ರೂಪಿಸಿದಂತೆಯೇ ರೂಪುಗೊಳ್ಗ್ಳುತ್ತಾರೆ. ಹೀಗಾಗಿ ನಿಮ್ಮ ಮಕ್ಕಳ ಧಮನಿ-ಧಮನಿಗಳಲ್ಲಿ ರಾಷ್ಟ್ರಪ್ರೇಮವನ್ನು ತುಂಬಿ, ಹೊರತು ಸಮಾಜ ಕಂಠಕಗಳನ್ನಲ್ಲ.
ಆತೀಶ್.ಬಿ.ಕನ್ನಾಳೆ

2 comments:

  1. namaskara udayonmukha barahagararige.....nimma ankanagalu manasige hitha needidavu.... sadhaneyattha nimma payana munduvareyali.... kannada bhashe bagegina matthashtu ankanagalu thamma barahagalalli moodibarali endu haraisuve....

    inthi...bhargavi

    ReplyDelete
  2. Its very good & inspirable article.. keep it up... Read this kind of social awerness articles more & more....

    ReplyDelete