Friday, October 9, 2015

childhood


ಕಣ್ಮುಚ್ಚಿದರೆ ನೆನಪಾಗೋದು ಡಬ್ಬಿ, ಮುಚ್ಚಳ, ಮರಳು! 
ಎಡ ಮುಷ್ಟಿಯಲ್ಲಿ ಮರಳು ಹಿಡಿದು (ಅಷ್ಟದಪ್ಪವೇನಲ್ಲದ) ಬಲ ಮುಂಗೈಯನ್ನು ರಪ- ರಪ ಎಂದು ಒಂದೇ ಸಮನೆ ಹೊಡಿದು ವೃತ್ತಾಕಾರದಲ್ಲಿ 360 ಡಿಗ್ರಿಯಲ್ಲಿ ಒಮ್ಮೆ ತಿರುಗಿಸಿದಾಗ ಇಡೀ ಮುಂಗೈ ರಕ್ತಸಿಕ್ತವಾಗುತ್ತಿತ್ತು. ಅದನ್ನು ತೋರಿ ಮ್ಯಾಜಿಕ್ ಎಂದು ನಗಿಸುತ್ತಿದ್ದ ಮುಗ್ಧತೆ. ಅ
ದರ ಹಿಂದೆ ಸಾವಿರ ವೈಜ್ಞಾನಿಕ ಕಾರಣಗಳಿದ್ದರೂ ಅವುಗಳು ಆ ವಯೋಮಾನದಲ್ಲಿ ಖಂಡತವಾಗಿಯೂ ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಅದು ಮೋಜಷ್ಟೆ, ಕೈ ಉರಿಯುತ್ತಿದ್ದರೂ ಗಂಟಲು ಕಟ್ಟುವಷ್ಟು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ಳುತ್ತಿದ್ದೇವು. ಸ್ನೇಹಿತರ ಬಳಗ ಸೇರಿ ಇಂತಹ ಕೆಲಸಗಳನ್ನು ಮಾಡುವಾಗ ಎಲ್ಲಿಲ್ಲದ ಖುಷಿ.
ಸಿಗರೇಟು ಸೇದಿ ಬೀಸಾಡಿದ ಡಬ್ಬಿಗೆ (ಆಗ ಬ್ರಿಸ್ಟಲ್ ಎಂಬ ಸಿಗರೇಟೇ ಶ್ರೇಷ್ಠವಾಗಿತ್ತು ಎಂಬ ಸತ್ಯ ಆಮೇಲೆ ತಿಳಿದಿದ್ದು) ರಂಧ್ರ ಮಾಡಿ ಥಮ್ಸ್ಅಪ್ ಮುಚ್ಚಳವನ್ನು ಕರಿಕಲ್ಲಿನ ಮೇಲಿಟ್ಟಿ ಗುದ್ದಿ ಅದನ್ನು ನೈಸಾಗಿಸಿ ಈಗಿನ ಎರಡೂ ರೂ. ಕ್ವಾಯಿನ್ನಂತೆ ಮಾಡುತ್ತಿದ್ದೇವು. ನಾಲ್ಕು ಮುಚ್ಚಳಗಳ ಮಧ್ಯ ಭಾಗಕ್ಕೆ ತೂತು ಮಾಡಿ ಟೈರ್ನಂತೆ ಸೊಗಸಾಗಿ ಜೋಡಿಸಿ ಅದಕ್ಕೊಂದು ಧಾರ ಪೋಣಿಸಿ ದರ - ದರ ಎಂದು ಎಳೆದೊಯ್ಯುತ್ತ ಕಾಲೊನಿ ಇಡೀ ಓಡಾಡುತ್ತಿದ್ದೇವು. ಹೀಗೆ ಆಟ ಆಡುವಾಗ ಅಮ್ಮನದ್ದು ಪ್ರತಿ ಸಾರಿ ಒಂದೇ ತಕರಾರು ಕಾಲಲ್ಲಿ ಚಪ್ಲಿ ಇಲ್ದೆ ಆಡೋದು ಅದೂ ಓದೋದನ್ನು ಬಿಟ್ಟು ಎಂದು ಕೋಲಿನಿಂದ ಬಾರಿಸಿದಾಗ ಹ್ಯಾಪು ಮುಖ ಮಾಡಿ ಅನಿವಾರ್ಯವಾಗಿ ಹೋಗಬೇಕಾದ ಪ್ರಸಂಗ ಬಂದೊದಗುತ್ತಿತ್ತು.
ಅಮ್ಮನ ಸ್ವಭಾವವೇ ಹಾಗೆ ಬಡಾವಣೆಯವರ ಯಾರೊಂದಿಗೂ ಹೆಚ್ಚು ಕಾಲ ಆಡವಾಡಬಾರದು. ಇದಕ್ಕೆ ಅವರು ಕಂಡಿದ್ದ ಜಗತ್ತಿನ ಅನುಭವ ಎಂದು ಈಗ ಅರ್ಥವಾಗುತ್ತದೆ. ಆದರೆ ಅದನ್ನು ನೆನೆಸಿಕೊಂಡಾಗಲೆಲ್ಲ ನಮ್ಮಮ್ಮನಿಗೆ ಸಲ್ಯೂಟ್ ಮಾಡಲೇಬೇಕು ಎನಿಸುತ್ತದೆ. ಆಕೆಯದ್ದು ಅದ್ಭತ ಸ್ವಭಾವ, ಯಾರೊಂದಿಗೂ ಬೆರೆಯಬಾರದು ಎಂಬುದು ಎಷ್ಟು ಕಟ್ಟುನಿಟ್ಟಿನ ನಿಯಮವೋ ಅದೇರೀತಿ ಓದುವ ವಿಚಾರದಲ್ಲಿ ಮಾತ್ರ ನೋ ಕಂಡಿಷನ್. ಪ್ರತಿಹಂತದಲ್ಲೂ ತಿದ್ದುತ್ತ ತೀಡುತ್ತ ಬೆಳೆಸಿದ ಮಹಾ ಚೇತನ ಆಕೆ. ಅಮ್ಮನ ಕುರಿತು ಇನ್ನೊಂದೇ ಲೇಖನ ಬರೆಯಬೇಕು. ಅದಕ್ಕಾಗಿ ಈ ವಿಷಯವನ್ನು ಇಲ್ಲಿಗೆ ಬಿಡುತ್ತೇನೆ. ಅದ್ಯಾಕೊ ಎಲ್ಲವನ್ನೂ ಇದರಲ್ಲಿಯೇ ಸೇರಿಸುವುದು ನನಗೆ ಅಷ್ಟೊಂದು ಸೂಕ್ತ ಎನಿಸುತ್ತಿಲ್ಲ. ಅದಕ್ಕೆ ಕ್ಷಮಿಸಿ.
ಎಲ್ಲರೂ ಒಂದೆ ಮನಸ್ಸಿನಿಂದ ಸೇರಿ ಆಡಿದ ನೆನಪು, ಈಗ ನೆನಪಾಗಿ ಆ ಡಬ್ಬಿ, ಈ ಮುಚ್ಚಳ, ಜತೆಗೆ ಒಂದಿಷ್ಟು ಮರಳು ,.. ಖುಷಿ ನೀಡುತ್ತವೆ. ಈಗಿನ ಪೀಳಿಗೆಗಳಿಗೆಲ್ಲಿವೆ ಈ ನೆನಹು? ಸ್ಮರಿಸಬಹುದು ಎನ್ನುವ ಬಾಲ್ಯ? ಹಸುಳೆ ಇರುವಾಗಲೇ ಬೆನ್ನೆಲುಬು ಮುರಿಯುವಷ್ಟು ತೂಕದ ಹೊತ್ತಗೆ, ಬಿಕ್ಕಿ ಅಳುವಾಗ ಕಣ್ಣೀರು ಒರೆಸಲು ಒಬ್ಬ ಆಯಾ, ಪಾಲರನ್ನು ಭೇಟಿಮಾಡುವುದೆಂದರೆ ದೊಡ್ಡ ಪೀಕಲಾಟವೇ ಸರಿ. ಅಪ್ಪ- ಅಮ್ಮಂದಿರಂತೂ ಆಗ ತಾನೆ ವಿರೋಧ ಪಕ್ಷ ಸ್ಥಾನದಲ್ಲಿದ್ದ ಜನಪ್ರತಿನಿಧಿಗಳಿಗೆ ಆಡಳಿತ ಪಕ್ಷದ ಸಚಿವಗಿರಿ ಸಿಕ್ಕಷ್ಟು ಟೈಟ್ ಶೆಡ್ಯೂಲ್. ಈ ಬಿಜಿ ಜಮಾನಾದಲ್ಲಿ ಮಗು ತನ್ನ ಬಾಲ್ಯ, ಭಾರತ ಉತ್ತಮ ಪ್ರಜೆ ಹಾಗೂ ಸಮಾಜ ತನ್ನ ಸಂಸ್ಕಾರಯುವ ವ್ಯಕ್ತಿ ಹೊಂದುವುದರಿಂದ ವಂಚಿತವಾಗುತ್ತಿವೆ.
- ಬಿ.ಕೆ. ಆತೀಶ

No comments:

Post a Comment