Sunday, March 6, 2011

Dare 2 B Different...

ಏನಾಗಲಿ ಮುಂದೆ ಸಾಗುನಿ.... 
ಹೆಣ್ಣೊಂದು ಮನಸು ಮಾಡಿದರೆ!


ಈ ಪ್ರಪಂಚದಲ್ಲಿ ಮಾತಿನ ಜಾಣರೇ ಹೆಚ್ಚು. ಮಾತಿನಲ್ಲಿ ಮಂಟಪ ಕಟ್ಟುವಷ್ಟು ಚತುರರಿರುತ್ತಾರೆ. ಕೆಲವರ ಬೆರಗುಗೊಳಿಸುವ ಮಾತಂತೂ ನಿಮಿಷಾರ್ಧದಲ್ಲಿ ಮತ್ತೊಂದು ಲೋಕವನ್ನು ಇಳೆಗಿಳಿಸುವಷ್ಟು ಪ್ರಭಾವಪೂರ್ಣವಾಗಿರುತ್ತದೆ. ಓ! ಇನ್ನೇನು ಎಲ್ಲವೂ ಆಯಿತು, ಅವರು ಹೇಳಿದ್ದೆಲ್ಲ ನನಗೆ ದೊರಕೇಬಿಟ್ಟಿತು ಎಂದು ನಂಬಿಕೊಳ್ಳುವಂತೆ ಮಾಡಿಬಿಡುತ್ತದೆ.
ಹೀಗೆ ಮಾಡುವುದು ವಾಕ್ಚತುರರಿಗಂತೂ ಅತ್ಯಂತ ಸುಲಭ. ಆದರೆ ಆಡಿದ ಮಾತನ್ನು ಕೃತಿಗಿಳಿಸುವುದು ಅಷ್ಟು ಸುಲಭವಲ್ಲ. ಅದೇ ಮಾತಿಗೂ ಕೃತಿಗೂ ಇರುವ ವ್ಯತ್ಯಾಸ. ವೇದಿಕೆ ಮೇಲೆ ನಿಂತು ಆದರ್ಶದ ಮಾತು ಗಳನ್ನು ಗಂಟೆಗಟ್ಟಲೆ ಆಡಿಬಿಡಬಹುದು, ಆದರೆ ಅವುಗಳನ್ನು ಬದುಕಿಗೆ ಅಳವಡಿಸಿಕೊಳ್ಳಲು ಹೊರಟಾಗ ಸಂಕಟಗಳ ಸರಮಾಲೆಯೇ ಮುಂದೆ ನಿಲ್ಲುತ್ತದೆ. ಬದುಕು ನಿತ್ಯದ ಹೋರಾಟವಾಗುತ್ತದೆ. ಹಾಗೆಂದು ಹೋರಾಟಕ್ಕೆ ಎಲ್ಲರೂ ವಿಮುಖವಾದರೆ ಆದರ್ಶಮಯ ವ್ಯಕ್ತಿಗಳು ಕಾಣದಾಗಿಬಿಡುತ್ತಾರೆ. ಹಾಗೆ ಅಂತಹ ಆದರ್ಶ, ವಿಶೇಷ ಗುರಿಗಳಿಗೆ ತಮ್ಮನ್ನು ಒಪ್ಪಿಸಿ ಕೊಂಡವರಿಗೆ ತ್ಯಾಗ, ಸಂಘರ್ಷ, ಹೋರಾಟದ ಜೀವನ ಅವಶ್ಯ. ಹೀಗೆ ಬದುಕಿದವರೇ ಇತಿಹಾಸದ ಪುಟಗಳಲ್ಲಿ ಶೋಭಿಸಲು ಸಾಧ್ಯ.
ಈಗೆಲ್ಲ ದಾಖಲೆ ವೀರರೇ ಶೋಭಿಸುವ ಕಾಲ. ಏನಾದರೂ ಸಾಧಿಸಬೇಕು, ನಮ್ಮಿಂದ ನಾಲ್ಕಾರು ಜನಕ್ಕೆ ಒಳ್ಳೆಯದಾಗಬೇಕು ಎಂದು ಭಾವಿಸುವವರು ಅತಿ ಕಡಿಮೆ. ಹಾಗೆ ಸಾಧಿಸಲು ಹೊರಟರೆ ಸಾಧನೆ ಬೇಕೆಂದಾಗ ಕೈಗೆ ಸಿಗುವ ಹಿತ್ತಲ ಕುಂಬಳಕಾಯಲ್ಲ. ಕಾಸು ಕೊಟ್ಟರೆ ಸುಲಭವಾಗಿ ದೊರಕಬಲ್ಲ ಆಟಿಕೆಯೂ ಅಲ್ಲ.
ಸವಾಲುಗಳನ್ನು ಸ್ವೀಕರಿಸಿ, ಸಾಧಿಸಲು ಮುಂದಾಗು ವವರಿಗೆ ಶ್ರಮ, ಸಹನೆ ಅತ್ಯವಶ್ಯ. ಶಿಲ್ಪಿ ಒಂದು ಕಲ್ಲನ್ನು ಸುಂದರವಾದ ಕಲಾಕೃತಿಯಾಗಿ ನಿಮರ್ಿಸುವಾಗ ಶಿಲ್ಪಿಗೆ ಏಕಾಗ್ರತೆ, ಗುರಿ ಮುಖ್ಯವಾದರೆ ಆ ಕಲ್ಲಿಗೆ ಸಹಸ್ರಾರು ಪೆಟ್ಟುಗಳನ್ನು ಸಹಿಸಬಲ್ಲೆನೆಂಬ ಛಾತಿ ಅನಿ ವಾರ್ಯ. ಹಾಗಾದಾಗ ಮಾತ್ರ ಅದು ಮುಂದೊಂದು ದಿನ ಸರ್ವರ ಚಿತ್ತ ತನ್ನತ್ತ ಸೆಳೆಯಬಲ್ಲ ಸುಂದರ ಮೂತರ್ಿಯಾಗಿ ರೂಪುಗೊಳ್ಳಲು ಸಾಧ್ಯ.
ಒಂದು ವೇಳೆ ಪೆಟ್ಟುಗಳಿಗೆ ಹೆದರಿ ಹುದುಗಿ ಕುಳಿತಲ್ಲಿ ಅದು ಜನ ತಿಂದು ತೇಗಿ ಹರಟುವ ಹರಟೆ ಕಟ್ಟೆಯಾಗಬಹುದು ಇಲ್ಲವೆ ತುಳಿದು ಮುಂದೆ ಸಾಗುವ ಹಾಸುಗಲ್ಲೂ ಆಗಬಹುದು.
ಹಾಗೆಯೇ ಮನುಷ್ಯ ತನ್ನ ಜೀವನ ಸಂತೃಪ್ತಿ ಕಾಣ ಬೇಕಾದರೆ ಅದಕ್ಕೊಂದು ಅರ್ಥ ನೀಡಬೇಕೆಂದಾದಲ್ಲಿ ಬೇಕಾದ-ಬೇಡವಾದ ಹಲವಾರು ಕಷ್ಟಗಳನ್ನು ಎದುರಿಸ ಬೇಕು, ಸಹಿಸಲೂಬೇಕು.
ತೊಡರುಗಳ ಸರಮಾಲೆ
ಇಂದಿನ ಜಾಗತೀಕರಣದ ಯುಗದಲ್ಲಿ ಜನರು ಸ್ವತೃಪ್ತಿಗಾಗಷ್ಟೇ ಬದುಕಿದರೆ ಸಾಕು ಎನ್ನುವಷ್ಟು ಸ್ವಾಥರ್ಿಗಳಾಗಿದ್ದಾರೆ. ಸಮಾಜ ಸೇವೆಯ ಹೆಸರಲ್ಲಿ ಸ್ವಾರ್ಥಸಾಧನೆ ಮಾಡಿಕೊಳ್ಳುವವರೇ ಹೆಚ್ಚು. ಉಪಕಾರ-ಅಪಕಾರಗಳ ಚಿಂತೆ ಇಲ್ಲದೆ ತನ್ನಷ್ಟಕ್ಕೆ ತಾನು ಬದುಕುವುದೇ ದೊಡ್ಡ ಸಾಧನೆ ಎನಿಸಿರುವ ಈ ಕಾಲಮಾನದಲ್ಲಿ ಸಾಧಿಸುವುದು-ಸೇವೆ ಮಾಡುವುದು ಎಂದರೆ ಸಣ್ಣ ವಿಷಯವಲ್ಲ. ಬಹಳಷ್ಟು ಬಾರಿ ಈ ಸಾಧನೆಗಳು ವೈಯಕ್ತಿಕವಾಗಿದ್ದು ಹೆಸರು ಸಂಪಾದನೆ ಗಾಗಿ ಸೀಮಿತವಾಗಿರುತ್ತದೆಯೇ ವಿನಃ ಸಮಾಜ, ಸಮೂಹದ ಉಪಕಾರಕ್ಕಾಗಿ ಇರುವುದಿಲ್ಲ. ಅಪರೂಪ ಕ್ಕೊಮ್ಮೆ ಕಾಣುವ ಕೋಲ್ಮಿಂಚಿನಂತೆ ಅಲ್ಲೊಬ್ಬರು ಇಲ್ಲೊಬ್ಬರು ಸೇವಾಮನೋಭಾವದಿಂದ ಸಾಮಾಜಿಕ ಕ್ಷೇತ್ರಕ್ಕೆ ಧುಮುಕುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದೆಂದರೆ ಸಾಹಸವೇ ಸರಿ. ಅದರಲ್ಲೂ ಆ ವ್ಯಕ್ತಿ ಮಹಿಳೆಯಾದರೆ ಕಾರ್ಯಸಾಧನೆ, ಅಭಿವೃದ್ಧಿ ಎಲ್ಲವೂ ಹರಸಾಹಸವೇ ಸರಿ.
ನೂರಾರು ಜನರ ನಡುವೆ ಮುನ್ನುಗ್ಗಿ ಕೆಲಸ ಮಾಡ ಬೇಕಾದಾಗ ಪ್ರೋತ್ಸಾಹ ನೀಡುವುದಕ್ಕಿಂತ ಕಾಲೆಳೆಯು ವವರೇ ಹೆಚ್ಚು. ಓರ್ವ ಮಹಿಳೆ ಏನನ್ನಾದರೂ ಮಾಡ ಬೇಕೆಂದಾದಲ್ಲಿ ಅದಕ್ಕೆ ಪುರುಷಪ್ರಧಾನ ಸಮಾಜದ ಕಟ್ಟುಕಟ್ಟಳೆಗಳು ತೊಡರುಗಳಾಗೇ ಗೋಚರಿಸುತ್ತವೆ. ಭಂಡ ಧೈರ್ಯದಿಂದ ಮುಂದೆ ಹೋದರೂ ಕಟ್ಟಿಟ್ಟ ಕಷ್ಟದ ಬುತ್ತಿಯ ಜೊತೆಗೆ ಟೀಕೆ-ನಿಂದನೆ, ಕೋಟಳೆಗಳ ಮುಖಾಮುಖಿ.
ಇಂಥ ಹಲವಾರು ಸಾಂಪ್ರದಾಯಿಕ-ಪ್ರಾದೇಶಿಕ-ಸಾಮಾಜಿಕ ಸವಾಲುಗಳ ಮಧ್ಯೆ ಒಬ್ಬ ಯುವತಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದು ಯಾವ ಸ್ವಾರ್ಥವಿಲ್ಲದೆ ಸಮಾಜಕಾರ್ಯಗಳಲ್ಲಿ ತೊಡಗಿದರೆಂದರೆ ಅವರಿಗೆ ಹ್ಯಾಟ್ಸ್ ಅಪ್ ಎನ್ನಲೇಬೇಕಲ್ಲ!
ಹೆಸರು ಶಿಖಾಸಿಂಗ್. ಓದಿದ್ದು ದೆಹಲಿ ವಿಶ್ವವಿದ್ಯಾಲಯದಲ್ಲಿ. 1999ರಲ್ಲಿ ತಮ್ಮ ಎಂಬಿಎ ಮುಗಿಸಿ, ನಂತರ ದೆಹಲಿಯಲ್ಲಿಯೇ ಇಟಲಿ ರಾಯಭಾರಿ ಕಚೇರಿ ಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಯಭಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶಗಳಿಗೇನು ಕೊರತೆ? ಶಿಖಾ ಅವರಿಗೂ ಹಾಗೆಯೇ ಅವಕಾಶಗಳು ನಾ ಮುಂದು, ತಾ ಮುಂದು ಸಾಲುಗಟ್ಟಿ ನಿಂತಿದ್ದವು. ಆದರೆ ಆಕೆಯ ಆಯ್ಕೆ ಸಮಾಜ ಸೇವೆಯಾಗಿತ್ತು.
ಮನದಾಳದ ಮಾತು:
ನಾನು ದೇಶ-ವಿದೇಶಗಳನ್ನು ಸುತ್ತಿದ್ದೇನೆ. ಹೊರದೇಶಗಳಲ್ಲಿ ನನಗೆ ಅಪಾರ ಅವಕಾಶಗಳಿದ್ದವು. ಹಾಗೆಯೇ ಸಾಧಿಸಲು ಹಲವಾರು ಮಾರ್ಗಗಳಿದ್ದವು. ಜೀವನದಲ್ಲಿ ಮಹತ್ತರವಾದ ಹಾಗೂ ಅರ್ಥಪೂರ್ಣ ವಾದ ಕಾರ್ಯ ಮಾಡಲು ಮನಸ್ಸು ಹಾತೊರೆಯುತಿತ್ತು. ಅದೇ ಸಂದರ್ಭದಲ್ಲಿ ಕೆ. ಎನ್. ಗೋವಿಂದಾಚಾರ್ಯರ ಕನಸಿನ ಕೂಸಾದ ಭಾರತ ವಿಕಾಸ ಸಂಗಮದ 3ನೇ ಕಾರ್ಯಕ್ರಮವಾದ `ಕಲ್ಬುಗರ್ಿ ಕಂಪು 2010' ರ ಕಾರ್ಯಕ್ರಮದಲ್ಲಿ ಜನರ ಜೊತೆ ಬೆರೆತು ಅವರ ಕಷ್ಟ, ಸಮಸ್ಯೆ, ಸವಾಲುಗಳನ್ನು ತಿಳಿದುಕೊಳ್ಳಲು, ಅವಶ್ಯವಿದ್ದಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಒಂದು ಸುವರ್ಣ ಅವಕಾಶ ದೊರಕಿತು ಎಂದೇ ಇದನ್ನು ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ ಶಿಖಾ ಇಟಲಿ ರಾಯಭಾರಿ ಕಚೇರಿಯ ತಮ್ಮ ವೃತ್ತಿಗೆ ರಾಜೀನಾಮೆ ಇತ್ತು ಕಲ್ಬುಗರ್ಿಗೆ ಕಾಲಿಟ್ಟಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು ಹಿಂದಿ ಮಿಶ್ರಿತ ಕನ್ನಡದಲ್ಲಿ ಹೇಳುವಾಗ ಧನ್ಯತೆ, ಸಂತೃಪ್ತ ಭಾವ ಅವರ ಮೊಗದಲ್ಲಿ ಎದ್ದು ಕುಣಿಯುತಿತ್ತು.
ಏನಿದು ಭಾರತ ವಿಕಾಸ ಸಂಗಮ?
ಕೊತ್ತಲ ಬಸವೇಶ್ವರ ಭಾರತ ವಿಕಾಸ ಸಂಗಮ ಸಮಿತಿ, ಸೇಡಂ 1974ರಲ್ಲಿ ಹೈದರಾಬಾದ್-ಕನರ್ಾಟಕ ಭಾಗದ ಅಭಿವೃದ್ಧಿಗಾಗಿ ಇದನ್ನು ಪ್ರಾರಂಭಿಸಿತು. ಇದರ ಪ್ರಮುಖ ಉದ್ದೇಶ ಈ ಭಾಗದ 5 ಜಿಲ್ಲೆಗಳು ಹಾಗೂ 24 ತಾಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದು. ಆಥರ್ಿಕ, ಕೃಷಿ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣ, ಪ್ರವಾಸ, ಶಿಷ್ಯವೇತನ, ಮಹಿಳಾ ಸಶಕ್ತಿಕರಣದ ಬಹುಮುಖ್ಯವಾದ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ವಹಿಸಿಕೊಳ್ಳಲಾಗಿದೆ. ಈ ಕಾರ್ಯದ ಚಾಲನೆ ಗಾಗಿ ಭಾರತ ವಿಕಾಸ ಸಂಗಮ ಸಮಿತಿ `ಕಲ್ಬುಗರ್ಿ ಕಂಪು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಕಳೆದ ವರ್ಷ ಸಹ 10 ದಿನಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪ್ರಮುಖ ಧ್ಯೇಯ ಅಭಿವೃದ್ಧಿ ಇನ್ನೊಂದು ಅರ್ಥದಲ್ಲಿ ಗಾಂಧೀಜಿಯವರ ಕನಸಿನ ಪರಿಪೂರ್ಣತೆ ಎಂದರೂ ತಪ್ಪಾಗಲಾರದು.
ಇಂತಹ ಅರ್ಥಪೂರ್ಣ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ದೇಶದ ಇನ್ನೊಂದು ಮೂಲೆಯಿಂದ ಕಲ್ಬುಗರ್ಿಯಂತಹ ಬಿಸಿಲನಾಡಿಗೆ ಬಂದಿಳಿದ ಶಿಖಾರ ಆತ್ಮಸ್ಥೈರ್ಯ ಮೆಚ್ಚಬೇಕಾದದ್ದೆ. ತಿಳಿಯದ ಭಾಷೆ, ಜನ, ಜಾಗ...ಇವೆಲ್ಲದರ ನಡುವೆ ಕೆಲಸ ಮಾಡುವ ಉತ್ಕಟತೆ, ಮಾಡುವೆನೆಂಬ ಆತ್ಮವಿಶ್ವಾಸ ಇವೆರಡೇ ಆಕೆಯ ಜೊತೆಗಿದ್ದುದು.
ಸವಾಲುಗಳು:
ಸಾಮಾನ್ಯವಾಗಿ ಯಾವುದೇ ಒಬ್ಬ ಮಹಿಳೆ ಅದರಲ್ಲೂ ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಯಾವುದನ್ನೂ ತಿಳಿಯದ ಅವಿವಾಹಿತ ಯುವತಿ ದೊರೆತ ವಿಪುಲ ಅವಕಾಶಗಳನ್ನು ತೃಣವೆಂದು ಭಾವಿಸಿ, ಸೂರ್ಯನಗರಿ ಎನಿಸಿರುವ ಕಲ್ಬುಗರ್ಿಯಂತಹ ಸ್ಥಳಕ್ಕೆ ಬಂದು ಉದ್ಯೋಗ ಮಾಡುವುದೆಂದರೆ ಹುಡುಗಾಟವಲ್ಲ.
ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಹೈದ್ರಾಬಾದ್ ಕನರ್ಾಟಕವನ್ನು, ಇಲ್ಲಿನ ಜನರ ಜೀವನ ಮಟ್ಟ, ವ್ಯಕ್ತಿತ್ವ ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ನಿಮಿತ್ತ ಇವರು ಈ ಸಂಘಟನೆ ಮೂಲಕ ಪಡುತ್ತಿರುವ ಶ್ರಮ ಮಾತಿಗೆ ಎಟುಕು ಭಾವನೆಗಳಿಗೆ ನಿಲುಕದು.
`ಪ್ರಾರಂಭದಲ್ಲಂತೂ ಜನರೊಂದಿಗೆ ಒಂದಾಗುವಲ್ಲಿ ಅವರು ಬಹು ಶ್ರಮ ಪಟ್ಟಿದ್ದಾರೆ. `ಇಲ್ಲಿನ ಊಟ-ತಿಂಡಿ, ವಾತಾವರಣ ಇವೆಲ್ಲವುಗಳ ಜೊತೆ ಹೊಂದಿಕೊಳ್ಳಲು ಕೊಂಚ ಕಷ್ಟವೇನೋ ಪಡಬೇಕಾಯಿತು. ಆದರೆ, ಇಲ್ಲಿನ ಜನರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ನನಗೆ ನನ್ನ ಗುರಿ ಸಾಧನೆಯಲ್ಲಿ ಮತ್ತಷ್ಟು ಬಲವಾಗಿ ನಿಲ್ಲಲು ಹುರಿದುಂಬಿಸಿದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.'
ಪ್ರಾರಂಭದಲ್ಲಂತೂ ನಮ್ಮ ಕುಟುಂಬದವರು ಈ ಕೆಲಸಕ್ಕೆ ಒಪ್ಪಲಿಲ್ಲ. ತುಂಬಾ ಆತಂಕ ವ್ಯಕ್ತಪಡಿಸಿದ್ದರು. ಕುಟುಂಬದಿಂದ ನೀನೊಬ್ಬಳೆ ಅಲ್ಲಿ ಹೇಗಿರಲು ಸಾಧ್ಯ. ಎಂದು ತಡೆಯೊಡ್ಡಿದರು. ಅದೇನೋ ಅಂತಾರಲ್ಲ, ಗುರಿಗೆ ಧೈರ್ಯ ಪ್ರಚೋದನಾಕಾರಿಯಾಗಿ ನಿಲ್ಲುವು ದಾದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಅದರಂತೆ ನನಗೆ ಎಲ್ಲವೂ ಸರಳವಾಗಿಯೇ ಗೋಚರಿಸುತ್ತಿವೆ. ಬಂದ ಸವಾಲುಗಳನ್ನು ಭಾರವೆಂದು ನಾನು ಪರಿಗಣಿಸಿಲ್ಲ ಎಂದು ನಗೆ ಬೀರಿದರು.
ಕುಟುಂಬ:
ಶಿಖಾ ತಂದೆ ರೈಲ್ವೆ ಇಲಾಖೆಯಲ್ಲಿ ಕಾರ್ಯನಿವರ್ಾಹಕ ನಿದರ್ೇಶಕರಾಗಿ ಸೇವೆ ಸಲ್ಲಿಸಿರುವ ನಿವೃತ್ತ ಅಧಿಕಾರಿಗಳು. ಇವರೇ ಮನೆಗೆ ಹಿರಿಯ ಮಗಳು. ಆದರೆ ಇಂದು ಕುಟುಂಬವನ್ನು ಬಿಟ್ಟು ಒಬ್ಬರೇ ಕಲ್ಬುಗರ್ಿಯಲ್ಲಿದ್ದಾರೆ.
  
ಸ್ನೇಹಿತರೆ, ಯುವತಿಯೊಬ್ಬಳು ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು, ದೂರದ ದೆಹಲಿಯಿಂದ ಬಿಸಿಲನಾಡಿಗೆ ಬಂದು, ಅಭಿವೃದ್ಧಿ ಕಾರ್ಯಗಳಿಗಾಗಿ ಟೊಂಕಕಟ್ಟಿ ನಿಂತಿದ್ದಾರೆಂದರೆ ಅದು ಸಾಮಾನ್ಯ ವಿಷಯವಲ್ಲ. ಹೊರ ರಾಜ್ಯದವರಿಗೆ ನಮ್ಮ ಹಿಂದುಳಿದ ಜಿಲ್ಲೆ, ತಾಲ್ಲೂಕು, ಹೋಬಳಿಗಳ ಕುರಿತು ಅಷ್ಟೊಂದು ಆಸಕ್ತಿ ಇರುವಾಗ, ಇಲ್ಲಿಯೇ ಹುಟ್ಟಿ ಬೆಳೆದಿರುವ ನಮಗೆ ಅದರ ಬಗ್ಗೆ ಇನ್ನಷ್ಟು ಆಪ್ತತೆ ಇರಬೇಕು.
ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಹಳ್ಳಿಯಾದರೇನು, ದಿಲ್ಲಿಯಾದರೇನು ಸಾಮಾಜಿಕ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಬಲ್ಲಳು ಎನ್ನುವುದಕ್ಕೆ ಶಿಖಾಸಿಂಗ್ ಯುವಪೀಳಿಗೆಗಳಿಗೆ ಆದರ್ಶವಾಗಿ ನಿಲ್ಲಬಲ್ಲಾಕೆ.
ದಿಟ್ಟ ಹೆಜೆಯನ್ನಿಟ್ಟ ಶಿಖಾ ಜತೆ ನೀವು ಮಾತನಾಡಿ ಅವರನ್ನು ಮತ್ತಷ್ಟು ಹುರಿದುಂಬಿಸಬೇಕಾದ್ದಲ್ಲಿ 0847-2273810 ಕರೆ ಮಾಡಿ.
ಎನಿ ವೇ ಎಲ್ಲರೂ ಮುಂದೆ ಸಾಗೋಣ ಸಮಾಜ ಕಟ್ಟಲು ಎದೆಗಾರಿಕೆಯಿಂದ ಮುಂದೆ ಸಾಗೋಣ.....
ಆತೀಶ್ ಬಿ ಕನ್ನಾಳೆ


No comments:

Post a Comment